ಫಾ. ಬೆಂಜಮಿನ್‌ ಅರಾನ್ಹ

'ಉಕ್ಕಿನ ಮನುಷ್ಯ' ಎಂದಾಕ್ಷಣಕ್ಕೆ ನಮಗೆ ನೆನಪಾಗುವುದು ಸ್ವಾತಂತ್ರ್ಯ ಹೋರಾಟ ಕಾಲದ ಮುತ್ಸುದ್ದಿಗಳಲ್ಲಿ ಓರ್ವರಾದ ಗುಜರಾತಿನ ವಲ್ಲಭಬಾಯಿ ಪಟೇಲರು. ಅವರನ್ನು 'ಉಕ್ಕಿನ ಮನುಷ್ಯ'ರೆಂದು ಕರೆಯಲು ಕಾರಣಗಳೇನೇ ಇರಬಹುದು. ಆದರೆ ಅವರಂತೆಯೇ ಫಾದರ್‌ ಬೆಂಜಮಿನ್‌ ಅರಾನ್ಹರವರನ್ನು 'ಉಕ್ಕಿನ ಮನುಷ್ಯ'ರೆಂದು ಕರೆಯಲು ವಿಶೇಷ ಕಾರಣಗಳೇ ಇವೆ. ಅರಾನ್ಹಾರವರನ್ನು ಉಕ್ಕಿನ ಮನುಷ್ಯರೆಂದು ಕರೆಯಲು ಕಾರಣವಾದದ್ದು ಅವರಿಗೆ ಸಂಭವಿಸಿದ ಅಪಘಾತಗಳಿಂದ ಅವರು ಬದುಕಿ ಬಂದ ಘಟನೆಗಳು. ಮೂರು ಸಲ ಸಂಭವಿಸಿದ ಆಕಸ್ಮಿಕಗಳಲ್ಲಿಯೂ ಅವರ ಮೂಳೆಗಳು ಪುಡಿಗಟ್ಟಿದರೂ ಅವರು ಬದುಕಿ ಬಂದಿದ್ದರು. ಮೂರನೆಯ ಅಪಘಾತವಂತೂ ಭೀಕರವಾಗಿತ್ತು. ಅಲ್ಲಿಯೂ ಅವರು ಮರಣವನ್ನು ಜಯಿಸಿದ್ದರು. ಅದೇ ಕಾರಣಕ್ಕೆ ಅವರನ್ನು ಬಲ್ಲವರು ಅವರನ್ನು ಕರೆಯುತ್ತಿದ್ದುದೇ 'ಉಕ್ಕಿನ ಮನುಷ್ಯ' ಎಂದು.

ಹಾಗೆ ನೋಡುವುದಾದರೆ ನೋಡಲು ಒರಟರಂತೆ ಕಾಣಿಸಿದರೂ ಅವರ ಮನಸ್ಸು ಒರಟಲ್ಲ. ಸಹೃದಯವಂತಿಕೆ ಅವರ ಮೇಲ್ಗುಣ; ತಿಳಿ ಹಾಸ್ಯ ಬೆರೆತ ಅವರ ಮಾತುಗಳು ಆ ಮೇಲ್ಗುಣಕ್ಕೆ ಹಾಕಿದ ಚಿನ್ನದ ಮೆರುಗು.ಯಾರೊಂದಿಗಾದರೂ ಸರಿಯೆ ಸಹಜವಾಗಿಯೇ ಹೊಮ್ಮುವ ಅವರ ಹಾಸ್ಯಬೆರೆತ ಮಾತುಗಳು ಯಾರ ಮನಸ್ಸನ್ನು ಬೇಕಾದರೂ ಸೆಳೆಯಬಲ್ಲದು. ಅದು ಯಾರನ್ನೂ ನೋಯಿಸುವ ಹಾಸ್ಯವಲ್ಲ; ಕೀಳುದರ್ಜೆಯ ಹಾಸ್ಯವಂತೂ ಅಲ್ಲವೇ ಅಲ್ಲ; ಸಮಯ ಸಂದರ್ಭಗಳಿಗೆ ಅನುಸಾರವಾಗಿ ಮಾತು ಮಾತುಗಳಲ್ಲೇ ಹೊಮ್ಮುವ ತಿಳಿಹಾಸ್ಯ. ಮನಸ್ಸನ್ನು ಮುದಗೊಳಿಸುವ ಹಾಸ್ಯ; ಬಿಗು ವಾತಾವರಣವನ್ನು ತಿಳಿಗೊಳಿಸುವ ಹಾಸ್ಯ. ಅವರು ಅರಿತೋ ಅರಿಯದೆಯೋ ಅವರ ತುಟಿಗಳ ಅಂಚಿನಿಂದ ಹೊರಹೊಮ್ಮುವ ಸಹಜವಾದ ಹಾಸ್ಯವದು.

ತಾವು ಒಪ್ಪಿದ ಅಥವಾ ತಮಗೊಪ್ಪಿಸಿದ ಕೆಲಸಕಾರ್ಯಗಳನ್ನು ನಿಷ್ಠೆಯಿಂದ ಮಾಡುವ ಗುಣ ಫಾದರ್‌ ಅರಾನ್ಹರವರದ್ದು. ಅದರಲ್ಲೂ ಗ್ರಾಮೀಣ ಪ್ರದೇಶದ ಜನರೊಂದಿಗೆ ಹೊಂದಿಕೊಂಡು ಹೋಗುವ ಆ ಪ್ರದೇಶದ ಜನರನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸುವ ಪರಿ ಇದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಾಗುವಂತಹ ಕೆಲಸವಲ್ಲ. ಅದಕ್ಕೊಪ್ಪುವ ಆಕೃತಿ, ಎದೆಗಾರಿಕೆ; ಯಾರ ಮನಸ್ಸನ್ನೇ ಆಗಲಿ ಸೂಜಿಗಲ್ಲಿನಂತೆ ಸೆಳೆಯಬಲ್ಲ ಗುಣ ಅವರಲ್ಲಿದೆ.

ನನಗೆ ತಿಳಿದಂತೆ ಫಾದರ್‌ ಅರಾನ್ಹರವರಿಗೆ ಶತೃಗಳಿಲ್ಲ. ಇದ್ದರೆ ಅವರು ಖಂಡಿತವಾಗಿಯೂ ಒಳ್ಳೆಯ ಮನಸ್ಸಿನವರಾಗಿರಲು ಸಾಧ್ಯವೇ ಇಲ್ಲ. ಧಾರ್ಮಿಕ ಕಾರ್ಯಗಳಲ್ಲಾಗಲಿ, ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಾಗಲಿ ಅಥವಾ ಎಂತಹುದೇ ವಿಶೇಷ ಕಾರ್ಯಗಳಳ್ಲಾಗಲಿ ಸೈ ಎನ್ನುವ ಫಾದರ್‌ ಅರಾನ್ಹ ಬಯಸದೇ ಬಂದುದನ್ನೂ ಪಂಚಾಮೃತವೆಂದು ಸ್ವೀಕರಿಸುವ ಸಹೃದಯ ಸ್ವಭಾವವನ್ನು ಹೊಂದಿದವರು ಎನ್ನುವುದರಲ್ಲಿ ಎರಡು ಮಾತಿಲ್ಲ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ