ಸ್ವಾಮಿ ಡಾ.ದಯಾನಂದ ಪ್ರಭು

ಸ್ವಾಮಿ ಡಾ.ದಯಾನಂದ ಪ್ರಭುರವರು ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ಕ್ರೈಸ್ತ ಗುರುಗಳಲ್ಲಿ ಅತಿ ಪ್ರಮುಖರು.

ಇವರು ಜನನವಾದದ್ದು ೧೯೪೮, ನವೆಂಬರ್ ೨೩ರಲ್ಲಿ; ಜನ್ಮಸ್ಥಳ ಮೈಸೂರು. ಇವರ ತಂದೆ ಮಾರ್ಟಿನ್ ಮತ್ತು ತಾಯಿ ರೋಸ್ ಮೇರಿ. ಈ ದಂಪತಿಗಳ ಮೂರು ಗಂಡು, ಮೂರು ಹೆಣ್ಣು ಮಕ್ಕಳಲ್ಲಿ, ದಯಾನಂದ ಪ್ರಭುರವರು ಮೂರನೆಯವರು. ಇವರ ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಲ್ಲಿ. ಪ್ರೌಢಶಿಕ್ಷಣ ಹಾಸನದ ಸಂತ ಜೋಸೆಫರ ಶಾಲೆಯಲ್ಲಿ.

೧೯೬೭ರಲ್ಲಿ ಮೈಸೂರಿನ ಸಂತ ಮೇರಿ ಕಿರಿಯ ಗುರುಮಠಕ್ಕೆ ಸೇರುವ ಮೂಲಕ ಸನ್ಯಾಸ ದೀಕ್ಷೆ. ಅಲ್ಲಿ ಪಿಯುಸಿಯೊಂದಿಗೆ ಲತೀನ್ ಭಾಷೆಯ ಅಭ್ಯಾಸ. ಗುರುಮಠದಲ್ಲಿದ್ದಾಗಲೇ ಬರೆಯುವ ಹವ್ಯಾಸ ಮೈಗೂಡಿತು. ದೂತ, ನವಜ್ಯೋತಿ, ಕರ್ನಾಟಕ ತಾರೆಗಳಿಗೆ ಇವರ ಲೇಖನಗಳನ್ನು ಸಾಲುಸಾಲಾಗಿ ಬರೆದಿದ್ದಾರೆ.

ಮುಂದೆ ಬೆಂಗಳೂರಿನ ಸಂತ ಪೇತ್ರರ ಗುರುಮಠಕ್ಕೆ. ಅಲ್ಲಿ ಆರು ವರ್ಷಗಳ ಕಾಲ ಸತತ ಅಭ್ಯಾಸ. ಈ ಅವಧಿಯಲ್ಲಿ ಇವರಿಂದ ಇಂಗ್ಲಿಷ್ ನ 'ಎಕ್ಸೈಲ್ಡ್' ಎಂಬ ಕಾದಂಬರಿಯ ಕನ್ನಡ ರೂಪಾಂತರ. ಕರ್ನಾಟಕ ತಾರೆಯಲ್ಲಿ ಅದು 'ಕ್ರೈಸ್ತ ಗುರು ಕೊಲೆಗಾರರೆ?' ಎಂಬ ಹೆಸರಿನಲ್ಲಿ ಪ್ರಕಟ. ೧೯೭೭ರಲ್ಲಿ ಅದು 'ಗಡಿಪಾರು' ಎಂಬ ಹೆಸರಿನಲ್ಲಿ ಪುಸ್ತಕವೂ ಆಯಿತು. ಕನ್ನಡದಲ್ಲಿ 'ಎಂ.ಎ', ಇತಿಹಾಸದಲ್ಲಿ 'ಎಂ.ಎ' ಹಾಗೂ ಕ್ರೈಸ್ತಧರ್ಮ ಎಂಬ ವಿಷಯದ ಮೇಲೂ 'ಎಂ.ಎ' ಪದವಿಗಳನ್ನು ಇವರು ಪಡೆದಿದ್ದಾರಲ್ಲದೇ ಡಾಕ್ಟರೇಟನ್ನೂ ಗಳಿಸಿದ್ದಾರೆ.

೧೯೭೭ರಲ್ಲಿ ಗುರು ಪಟ್ಟಾಭಿಷೇಕ; ಪೂಜ್ಯ ಬಿಷಪ್ ಮಥಿಯಾಸ್ ಫೆರ್ನಾಂಡಿಸ್ ರವರ ಅಮೃತ ಹಸ್ತದಿಂದ. ಅಂದೇ ಮೈಸೂರಿನ ಸಂತ ಫಿಲೋಮಿನ ದೇವಾಲಯದ ಸಹಾಯಕ ಗುರುವಾಗಿ ನೇಮಕ. ಅಂದಿನ ಪ್ರಧಾನ ಗುರು ಸ್ವಾಮಿ ಗ್ರೆಗೊರಿಯುಸ್ ಮಾಡಪಿಳ್ಳಿ. ೧೯೮೦ರಿಂದ ಸಂತ ಫಿಲೋಮಿನ ವಸತಿಗೃಹಕ್ಕೆ ವಾರ್ಡನ್ ಆಗಿ ನೇಮಕ.

ಡಾ.ಎಚ್ಚೆಸ್ಕೆ, ಡಾ.ಸಿ.ಪಿ.ಕೆ ಮತ್ತು ಹಂಪನಾ ರಿಂದ 'ದೂತ'ನಿಗಾಗಿ ಲೇಖನಗಳನ್ನು ಬರೆಸಿದರಲ್ಲದೇ ಇವರ ಅವಧಿಯಲ್ಲಿ 'ದೂತ' ವಜ್ರಮಹೋತ್ಸವವನ್ನು ಆಚರಿಸಿತು. ಅದರ ನೆನಪಿಗೆ ವಿಶೇಷ ಸ್ಮರಣ ಸಂಚಿಕೆಯನ್ನೂ ಇವರು ಹೊರತಂದರು.

೧೯೮೯ರಲ್ಲಿ ಕೊಡಗಿನ ಸೋಮವಾರಪೇಟೆಯ ಜಯವೀರ ಮಾತೆಯ ದೇವಾಲಯದ ಗುರುವಾಗಿಯೂ, ಸಂತ ಜೋಸೆಫರ ಶಾಲೆಯ ವ್ಯವಸ್ಥಾಪಕರಾಗಿಯೂ ಅಧಿಕಾರ ಸ್ವೀಕಾರ. ಅಲ್ಲಿದ್ದ ಸಮಯದಲ್ಲಿ, ಬಾಲ ಯೇಸುವಿಗಾಗಿ ಪುಟ್ಟ ಗುಡಿಯನ್ನೂ, ಮರಿಯಮ್ಮನವರಿಗಾಗಿ ಗ್ರೊಟ್ಟೊವ ನ್ನೂ ಕಟ್ಟಿಸಿದ ಹೆಗ್ಗಳಿಕೆ ಇವರದು. ಅಲ್ಲದೇ ದೇವಾಲಯವನ್ನು ಸರ್ವಾಂಗೀಣವಾಗಿ ಸುಂದರಗೊಳಿಸಿದ್ದಲ್ಲದೇ ಶಾಲೆಯ ಕಚೇರಿ, ಗ್ರಂಥಾಲಯ, ಪ್ರಯೋಗಾಲಯಗಳಿಗೆ ಹೊಸ ಕಟ್ಟಡವನ್ನು ನಿರ್ಮಿಸಿ ಕೊಟ್ಟ ಕೀರ್ತಿಯೂ ಇವರಿಗೇ ಸಲ್ಲುತ್ತದೆ.

೧೯೯೬ರಲ್ಲಿ ಮೈಸೂರಿನ ದೀನರ ಮಾತೆಯ ದೇವಾಲಯಕ್ಕೆ ವರ್ಗ. ಅಲ್ಲಿ ಧರ್ಮಕೇಂದ್ರದ ಬಡ ಮಕ್ಕಳಿಗಾಗಿ 'ಬಡ ಮಕ್ಕಳ ಶೈಕ್ಷಣಿಕ ನಿಧಿ'ಯ ಹಾಗೂ ಬಡ ರೋಗಿಗಳಿಗಾಗಿ 'ದೀನರ ಮಾತೆಯ ಆರೊಗ್ಯ ನಿಧಿ'ಯ ಸ್ಥಾಪನೆಯನ್ನು ಮಾಡಿದರು.

೨೦೦೫ರಿಂದ ತಿರುಮಕೂಡಲು ನರಸಿಪುರದ ಯೇಸುಬಾಲರ ದೇವಾಲಯದ ಧರ್ಮಗುರುವಾಗಿ ವರ್ಗ. ಅಲ್ಲಿ ಲಿಟ್ಲ್ ಫ್ಲವರ್ ಪ್ರೌಢಶಾಲೆಯ ಸ್ಥಾಪನೆ. ಪ್ರಸ್ತುತ ಶ್ರೀರಂಗಪಟ್ಟಣ ಬಳಿಯ ಗಂಜಾಂ ಎಂಬಲ್ಲಿಯ ಚರ್ಚಿನ ಸೇವೆಯಲ್ಲಿ ನಿರತರಾಗಿದ್ದಾರೆ. ಪ್ರಭು ಯೇಸು ಕ್ರಿಸ್ತರ ಕುರಿತ್ತಾದ ಸಮಗ್ರ ಗ್ರಂಥವಾದ 'ಭುವನ ಜ್ಯೋತಿ'ಯ ಪ್ರಕಟಣೆ ೨೦೦೬ರಲ್ಲಿ. ಹೀಗೆ ಹೋದ ಕಡೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಏನಾದರೊಂದು ಮಾಡುವುದು ಗುರುವರ್ಯರ ಕಾಯಕ.

ಡಾ.ದಯಾನಂದ ಪ್ರಭುರವರ ಕೃತಿಗಳು
೧. ಗಡಿಪಾರು - ೧೯೭೭
೨. ಯೇಸು ಮತ್ತು ನಾನು- ೧೯೭೮
೩. ಕ್ರಿಸ್ತನೆಡೆಗೆ...- ೧೯೭೭
೪. ಗೊಲ್ಗೊಥ - ೧೯೮೭
೫. ಹದಿಹರೆಯದ ರೂಪರೇಷೆಗಳು- ೧೯೮೯
೬. ಮೈಸೂರು ಸಂಸ್ಥಾನದ ಕ್ರೈಸ್ತರ ಇತಿಹಾಸ- ೧೯೯೪
೭. ಮಾರಕ ರೋಗ ಏಡ್ಸ್
೮. ಧ್ಯಾನ ಸಂಗಮ- ೧೯೯೬
೯. ಯೇಸುಕ್ರಿಸ್ತರ ಕೊನೆಯ ೨೪ ಗಂಟೆಗಳು- ೧೯೯೭
೧೦.ಸಂಸ್ಕಾರ ವಿಧಿಗಳು ಮತ್ತು ವಿವಿಧ ಸಂದರ್ಭಗಳ ಅಶೀರ್ವಚನಗಳು
೧೧ ಭುವನಜ್ಯೋತಿ
೧೨. ಜನಪ್ರಿಯ ಸಚಿತ್ರ ಬೈಬಲ್‌-೨೦೧೬


ವಿಕಿಪೀಡಿಯಾದ ಲೇಖನಕ್ಕೆ ಭೇಟಿಕೊಡಿ







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ